ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಂಪರ್ಕ ಪಡೆದ ಗ್ರಾಹಕರ ಖಾತೆಗೆ ಬಂದ ಹಣ. ಏಪ್ರಿಲ್ 30ರ ಒಳಗೆ ಅಡುಗೆ ಅನಿಲ ಪಡೆದುಕೊಳ್ಳಿ – ಅನಂತಕುಮಾರ ಹೆಗಡೆ
ಕರೋನಾ ಸಾಂಕ್ರಾಮಿಕ ರೋಗದಿಂದ ಇಡೀ ದೇಶವೇ ಲಾಕ್ ಡೌನ್ ಆಗಿರುವುದರಿಂದ ದೇಶದ ಜನತೆಗೆ ತುಂಬಾ ಕಷ್ಟದಾಯಕವಾಗಿರುತ್ತದೆ. ಆದರೆ ಲಾಕ್ ಡೌನ್ ಅನಿವಾರ್ಯ. ಈ ಸಂದರ್ಭದಲ್ಲಿ ಅದರಲ್ಲೂ ಬಡವರ ಪರಿಸ್ಥಿತಿ ಹೇಳತೀರದು.
ಇವೆಲ್ಲವನ್ನೂ ಮನಗಂಡ ಕೇಂದ್ರ ಸರಕಾರವು ಅನೇಕ ಸವಲತ್ತುಗಳನ್ನು ಮಾಡಿಕೊಟ್ಟಿದೆ. ಇದರಿಂದ ದುಡುಮೆಯಿಲ್ಲದ ಅನೇಕ ಬಡ ಕುಟುಂಬಕ್ಕೆ ಆಸರೆಯಾಗಿದೆ.
ಅದರಲ್ಲಿ ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಂಪರ್ಕ ಪಡೆದ ಗ್ರಾಹಕರಿಗೆ ಮೂರು ತಿಂಗಳು ಕಾಲ ಉಚಿತ ಗ್ಯಾಸ್ ನೀಡುವ ಯೋಜನೆಯೂ ಒಂದು.
ಅದರಂತೆ ಉತ್ತರ ಕನ್ನಡ ಜಿಲ್ಲೆಯ 62205 (ಅರವತ್ತೆರಡು ಸಾವಿರದ ಎರಡುನೂರಾ ಐದು) ಖಾತೆಗಳಿಗೆ 4,85,82,105/- (ನಾಲ್ಕು ಕೋಟಿ ಎಂಬತೈದು ಲಕ್ಷದ ಎಂಬತ್ತೆರಡು ಸಾವಿರದ ನೂರಾ ಐದು) ರೂಪಾಯಿಗಳು ಉತ್ತರ ಕನ್ನಡ ಜಿಲ್ಲೆಗೆ ಜಮೆ ಆಗಿದ್ದು, ಪ್ರತಿ ಗ್ರಾಹಕರಿಗೂ ತಲಾ 781 ರೂಪಾಯಿಗಳನ್ನು ಎಪ್ರಿಲ್ ತಿಂಗಳ ಹಣವನ್ನು ನೇರವಾಗಿ ಅವರ ಖಾತೆಗೆ ಜಮೆ ಮಾಡಲಾಗಿದೆ.
ಏಪ್ರಿಲ್ 30ರ ಒಳಗಾಗಿ ಅಡುಗೆ ಅನಿಲ ತೆಗೆದುಕೊಳ್ಳದಿದ್ದರೆ, ಮುಂದಿನ ತಿಂಗಳ ಹಣ ಖಾತೆಗೆ ಜಮೆ ಆಗುವುದಿಲ್ಲ.
ಆದ್ದರಿಂದ ದಯವಿಟ್ಟು ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಂಪರ್ಕ ಪಡೆದ ಗ್ರಾಹಕರು ಎಪ್ರಿಲ್ 30ರೊಳಗಾಗಿ ಅಡುಗೆ ಅನಿಲವನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕಾಗಿ ಉತ್ತರ ಕನ್ನಡ ಜಿಲ್ಲೆಯ ಸಂಸದರಾದ ಅನಂತಕುಮಾರ ಹೆಗಡೆಯವರು ಈ ಮೂಲಕ ವಿನಂತಿಸಿದ್ದಾರೆ.
