ಅವನು ಮತ್ತು ಅವಳು

by

ಆಗಷ್ಟೇ ಹೊಸ ಗ್ರಹ ಹುಟ್ಟಿತ್ತು. ನಿರಾಕಾರ ಸೃಷ್ಟಿಕರ್ತನೋರ್ವ ಹೊಸ ಹೊಸ ಐಟಮ್ಮುಗಳನ್ನು ಟೈಮ್ ಗ್ಯಾಪಿಲ್ಲದೆ ರೆಡಿ ಮಾಡಿ ಭರ ಭರಾಂತ ಕ್ರಿಯೇಟ್ ಮಾಡ್ತಾ ಇದ್ದ. ಮಾಡ್ತಾ ಮಾಡ್ತಾ ಮನುಷ್ಯ ಅಂತ ಒಂದನ್ನು ಮಾಡಿದ. ಎಲ್ಲಾ ಆತು ನೋಡಕ್ಕೆ ಕಣ್ಣು, ಕೇಳಕ್ಕೆ ಕಿವಿ, ಮಾತಾಡಕ್ಕೆ ಬಾಯಿ, ಅಗಿಯಕ್ಕೆ ಹಲ್ಲು ಹೀಗೆ ಏನೇನು ಬೇಕೊ ಎಲ್ಲಾ ಮಾಡಿದ. ಆಮೇಲೆ ಇನ್ನು ಎಲ್ಲಾರನ್ನೂ ನಾನೇ ಮಾಡಕ್ಕಾಗಲ್ಲ ಅವರವರೇ ಮಾಡಿಕೊಳ್ಳಲಿ ಅಂತ ಅದೇ ತರ ಇನ್ನೊಂದನ್ನು ರೆಡಿ ಮಾಡಿದ. ಒಂದಕ್ಕೆ ಅವನು ಮತ್ತೊಂದಕ್ಕೆ ಅವಳು ಅಂತ ಹೆಸರಿಟ್ಟ.
ನೋಡಕ್ಕೆ ಎರಡೂ ಒಂದೇ ತರ ಇದ್ವು. ಒಂದಕ್ಕೆ ಜೀವಕೊಟ್ಟು ಹೇಳಿದ ” ನೀನು ಅವಳು. ಇನ್ನುಮುಂದೆ ನೀನು ಮತ್ತು ಅವನು ಸೇರಿ ನಿಮ್ಮ ಜನರನ್ನು ಸೃಷ್ಟಿಸಬೇಕು. ನಂಗೆ ತುಂಬಾ ಬೇರೆ ಬೇರೆ ಕೆಲಸ ಇದೆ, ಸೊ ಡೊಂಟ್ ಡಿಸ್ಟರ್ಬ್ ಮೀ!”
ಅವಳು ಅವನನ್ನು ಒಮ್ಮೆ ಮೇಲಿಂದ ಕೆಳಗೆ ನೋಡಿ, “ಓಹ್ ಸ್ವಾರಿ ಮೈ ಲಾರ್ಡ್, ಐ ಕಾಂಟ್, ಅವನಿಗೆ ಅದೇ ಇಲ್ಲ” ಅಂದುಬಿಟ್ಟಳು. “ಅರೇ! ಹೌದಲ್ವಾ? ಅವನಿಗೆ ನಾನು ಅದೇ ಮಾಡಿಲ್ಲ”. ಅಂತ ಹೇಳಿಕೊಂಡ ನಿರಾಕಾರ ಅವನಿಗೆ ದೈಹಿಕ ಶಕ್ತಿ, ಒರಟುತನ ಮತ್ತು ಭಾವನೆಗಳನ್ನು ಕಡಿಮೆ ಮಾಡಿ, ಅಂಗಾಂಗಳಲ್ಲಿ ಮಾರ್ಪಡಿಸಿ ಧಾಷ್ಟ್ಯತನ ಕೊಟ್ಟ, ಗಡ್ಡ ಮೀಸೆ ಇಟ್ಟ. ನಂತರ ಮುಖ್ಯವಾಗಿ ಬೇಕಾದ, ಅವಳು ಕೇಳಿದ ಅದು ಅಂದರೆ ಪುರುಷ ಬುದ್ಧಿಯನ್ನು ಅವನಿಗೆ ದಯಪಾಲಿಸಿದ. ನಂತರ ನಿರಾಕಾರನು ಅವಳಿಗೆ ನೀನೀಗ ಯೊಚಿಸುವ ಅಗತ್ಯವಿಲ್ಲ, ನೀವಿಬ್ಬರೂ ನಿಮ್ಮನ್ನು ಮೆಂಟೈನ್ ಮಾಡಿಕೊಳ್ಳುವುದರ ಜೊತೆಗೆ ನಿಮ್ಮಂತಹವರ ಸೃಷ್ಟಿಕೂಡಾ ಮಾಡಬೇಕು, ಆಲ್ ದಿ ಬೆಸ್ಟ್ ಎಂದು ಹೇಳಿ ಮರೆಯಾದ.
ಹೀಗೆ ಅವನಿಗೆ ಅದೇ ಇಲ್ಲಾ ಎಂದು ಸೃಷ್ಟಿಯ ಆರಂಭದಲ್ಲೇ ಈ ತಿರಸ್ಕಾರ ಎಂಬುದು ಬಂದಿದ್ದು, ಹೀಗೆ ತ್ಯಜಿಸುವ ವಿಚಾರ ಬಂದಾಗ ಚಾಣಕ್ಯ ಹೀಗೆ ಹೇಳ್ತಾನೆ…

ನಿರ್ಧನಂ ಪುರುಷಂ ವೇಶ್ಯಾ ಪ್ರಜಾ ಭಗ್ನಂ ನೃಪಂ ತ್ಯಜೇತ್ |
ಖಗಾ ವೀತಫಲಂ ವೃಕ್ಷಂ ಭುಕ್ತ್ವಾ ಚಾ ಭ್ಯಾಗತಾ ಗೃಹಂ ||

ವೇಶ್ಯೆಯು ಬಡವನಾದ ಗಿರಾಕಿಯನ್ನು ತ್ಯಜಿಸುವಳು, ಸೋತ ಅರಸನನ್ನು ಪ್ರಜೆಗಳು ತ್ಯಜಿಸುವರು. ಹಣ್ಣು ನೀಡದ ಮರದ ಆಶ್ರಯವನ್ನು ಹಕ್ಕಿಗಳು ಬಯಸಲಾರವು. ಆಗಂತುಕ ಅತಿಥಿಗಳು ಹೆಚ್ಚು ಹೊತ್ತು ನಿಲ್ಲಲಾರದೆ ಊಟ ಉಪಹಾರದ ನಂತರ ಬೇಗನೆ ಜಾಗ ಖಾಲಿ ಮಾಡುವರು.

Enter your email address to get latest updates on your email:

– ಎಂ.ಆರ್. ಸಚಿನ್

ಎಂ.ಅರ್.ಸಚಿನ್ ಶಿರಸಿಯ ಚೌಕಿಮಠದವರು. ಇಲೆಕ್ಟ್ರಿಕಲ್ ಡಿಪ್ಲೋಮಾ ಪದವಿ ಪಡೆದು ಮೆಕ್ಯಾನಿಕಲ್ ಬಿ.ಟೆಕ್ ಮುಗಿಸಿದಂತವರು. ಮೆನ್ಯುಫ್ಯಾಕ್ಚರಿಂಗ್, ಸಾಫ್ಟ್ ವೇರ್, ಮೀಡಿಯಾ ಹೀಗೆ ವಿವಿಧ ಕ್ಷೇತ್ರದಲ್ಲಿ ಸಂಚರಿಸಿದ ಈ ವಿಲಕ್ಷಣ ವ್ಯಕ್ತಿತ್ವದ ಇವರು ಸದ್ಯಕ್ಕೆ ಶಿರಸಿಯ ಜನಪ್ರಿಯ ವಾರಪತ್ರಿಕೆ ಶಿರಸಿ ಸಿರಿ ಯ ಸಂಪಾದಕರಾಗಿದ್ದಾರೆ. ಅನೇಕ ಪತ್ರಿಕೆಗಳಿಗೆ, ನಿಯತಕಾಲಿಕೆಗಳಿಗೆ ಲೇಖನ ಬರೆಯುವ ಇವರು ಸದ್ಯಕ್ಕೆ ನಮ್ಮ sirsi.infoಗೆ ದಿನಂಪ್ರತಿ ಚಾಣಕ್ಯ ನೀತಿಯನ್ನು ವಿಭಿನ್ನವಾಗಿ ನಿರೂಪಿಸುತ್ತಿದ್ದಾರೆ. ಲೇಖನ, ಚುಟುಕ, ತ್ರಿಪದಿ, ಫ್ಲಾಪಿಕತೆ ಹೀಗೆ ವಿಚಿತ್ರ ಶೈಲಿ ಇವರ ಬರಹದಲ್ಲಿ ಅಡಕವಾಗಿದೆ.
Sachin