Adyaksha Kannada Movie

by

ಚಿ.ತು. ಅಧ್ಯಕ್ಷ

ಅದೊಂದು ಹಳ್ಳಿ- ಹೆಸರು ಗೆಜ್ಜೆಪುರ. ಅಲ್ಲೊಂದು ಸಂಘ. ಸಂಘದ ಹೆಸರು ಚಿ.ತು.ಸಂಘ ! ಹಂಗಂದ್ರೆ ಚಿಂತೆ ಇಲ್ಲದ ತುಂಡೈಕ್ಳ ಸಂಘ ಅಂತ. ಅದಕ್ಕೆ ಅಧ್ಯಕ್ಷ ಚಂದ್ರಶೇಖರ್ ಗೌಡನಾಗಿ ಸ್ಟಾರಿಂಗ್ ಶರಣ್. ಅಲ್ಲಿಂದ ಶುರುವಾಗತ್ತೆ ಅಧ್ಯಕ್ಷನ ಆಡಳಿತ. ಆ ಊರಲ್ಲೊಬ್ಬ ಖಡಕ್ ಗೌಡ ಶಿವರುದ್ರೇಗೌಡನ ಪಾತ್ರದಲ್ಲಿ ರವಿಶಂಕರ್. ವಿಲನ್ ಲುಕ್ಕು, ಮಾತಲ್ಲಿ ಸಖತ್ ಕಿಕ್ಕು. ಕಾಮಿಡಿ ಫಿಲ್ಮನಲ್ಲೂ ರವಿಶಂಕರ್ ಅವರ ವಿಲನಿಸಂ ಅದ್ಭುತ.

ಕೆಲಸವಿಲ್ಲದ ಹೀರೋಗೆ ಲೈನ್ ಹಾಕೋದೆ ಕಾಯಕ. ಅವನಿಗೆ ತಕ್ಕ ಸಾಥಿಯಾಗಿ ಚಿಕ್ಕಣ್ಣನ ನಟನೆ ಕೂಡಾ ಗಮನಿಸತಕ್ಕಂತ ಅಂಶ. ಇಲ್ಲಿಯವರೆಗಿನ ಎಲ್ಲಾ ಪಾತ್ರಗಳಿಗಿಂತ ಒಂದು ಉತ್ತಮ ಪಾತ್ರ ಚಿಕ್ಕಣ್ಣಗೆ ಈ ಚಿತ್ರದಲ್ಲಿ ಸಿಕ್ಕಿದೆ. ಶರಣ್ ಮ್ಯಾನರಿಂಸ ಚೆನ್ನಾಗಿದೆ. ಸ್ಕೂಲ್ ಮಿಸ್ ಕಲ್ಯಾಣಿ (ವಿಕ್ಟರಿ ಹಿರೋಯಿನ್)ಗೆ ಡವ್ ಹೊಡೆಯುವ ಶರಣ್ ಲವ್ ಲೆಟರ್ ಬರೆದು ಕಳಿಸೋಕೆ ಸಿಕ್ಕ ಮೀಡಿಯೇಟರ್ ಗೌಡನ ಮಗಳು ಐಶು. ಆದರೆ ಪ್ರಾಯದ ಹುಡುಗಿ ಐಶ್ವರ‍್ಯ ಆ ಲವ್ ಲೆಟರ್ ನಾ, ಗಿಫ್ಟ್ ಕೊಟ್ಟಿದ್ದನ್ನಾ ಟೀಚರ್‌ಗೆ ಕೊಡದೇ ತಾನೇ ಇಟ್ಟುಕೊಳ್ಳುತ್ತಾ ಕೊನೆಗೆ ಶರಣ್ ಮೇಲೆ ಅವಳಿಗೇ ಲವ್ವಾಯಿತು. ಇತ್ತ ಶರಣ್ ಪ್ರೀತಿಸ್ತಿದ್ದ ಕಲ್ಯಾಣಿ ಮಿಸ್ ಬೇರೊಬ್ಬನ ಜೊತೆ ಮದುವೆಯಾಗಿ ಮಿಸಸ್ ಆದ್ಲು. ಶರಣ್ ಇನ್ನೇನು ಬಾಟ್ಲಿ ಹಿಡ್ಕೊಂಡು ದೇವ್‌ದಾಸ ಆಗ್ತಾನೆ ಅಂದುಕೊಂಡೋರಿಗೆ ಅಲ್ಲೊಂದು ಟ್ವಿಸ್ಟ್, ಶರಣ್ ಗೆ ಗೌಡನ ಮಗಳು ಹಳೇ ಲವ್‌ಗೆ ಸೇತುವೆಯಾಗಿದ್ದ ಐಶು (ರಕ್ಷಾ) ಮೇಲೆ ಮತ್ತೆ ಲವ್ವಾಯ್ತು. ರೋಗಿ ಬಯಸಿದ್ದು, ಡಾಕ್ಟರ್ ಕಳಿಸಿದ್ದು ಎರಡೂ ಒಂದೇ ಆಗಿತ್ತು. ಐಶೂಗೂ ಶರಣ್ ಗೂ ಲವ್ವಾಯ್ತಾ? ಗೌಡ ರವಿಶಂಕರ್ ಇಬ್ಬರಿಗೂ ಏನ್ ಮಾಡಿದಾ ಅನ್ನೋದನ್ನ ಟಾಕೀಜಿಗೆ ಹೋಗಿಯೇ ನೋಡಿದ್ರೆ ಚೆನ್ನ.

ಅಧ್ಯಕ್ಷ ತಮಿಳಿನ ವರುಥಪಡತ ವಲಿಬಾರ್ ಸಂಗಂ ರೀಮೇಕಾದ್ರೂ ನಿರ್ದೇಶಕ ನಂದಕಿಶೋರ್ ಕನ್ನಡದ ನೇಟಿವಿಟಿಗೆ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಚಿತ್ರದುದ್ದಕ್ಕೂ ಹಾಸ್ಯವಿದ್ದರೂ ಎಲ್ಲೂ ಡಬಲ್ ಮೀನಿಂಗ್ ಸಂಭಾಷಣೆ ಬರದೇ ಕೌಟುಂಬಿಕ ಚಿತ್ರವಾಗಿ ಮೂಡಿ ಬಂದಿದೆ. ಅರ್ಜುನ್ ಜನ್ಯಾ ಸಂಗೀತ ಸುಮಧುರವಾಗಿದೆ. ರವಿಶಂಕರ್ ಅವರ ನೃತ್ಯ ಈ ಚಿತ್ರದ ವಿಶೇಷತೆಗಳಲ್ಲೊಂದು. ಕೆ.ಎಮ್. ಪ್ರಕಾಶ್ ಸಂಕಲನ ಪರವಾಗಿಲ್ಲ. ಸಾಹಿತ್ಯವೂ ಚೆನ್ನಾಗಿದ್ದು, ಯೋಗರಾಜ್ ಭಟ್ರ ಮೊಬೈಲಿಲ್ಲ, ಮೆಸೆಜಿಲ್ಲ ಹಾಡಲ್ಲಿ ಶ್ರೀನಗರ ಕಿಟ್ಟಿ, ತರುಣ್ ಸುಧೀರ್, ಶ್ರೀಮುರಳಿ, ನೆನಪಿರಲಿ ಪ್ರೇಮ್ ಶರಣ್ ಮತ್ತು ಚಿಕ್ಕಣ್ಣನ ಜೊತೆ ಹೆಜ್ಜೆ ಹಾಕಿದ್ದಾರೆ. ರಕ್ಷಾಗೂ ಮುಂದೆ ಒಳ್ಳೆ ಭವಿಷ್ಯವಿದೆ. ವಿಕ್ಟರಿ ಟೀಮ್‌ನ ವಿಕ್ಟರಿ ಈ ಚಿತ್ರದಲ್ಲೂ ಮುಂದುವರೆಯುವ ನಿರೀಕ್ಷೆಯಿದೆ.