Rose Kannada Movie

by

ಪ್ರೀತಿಯ ‘ಆಳ’ ಕ್ಕಿಳಿಯುವ ರೋಜ್ ಕೊನೆಗೂ ಮೇಲೆ ಬರಲಾಗದೇ ಬಿದ್ದುಬಿಡುತ್ತದೆ. ಆದರೂ ಒಂದು ಸುಂದರ ಪ್ರೇಮಕಥೆಯ ನಿರೀಕ್ಷೆಯಲ್ಲಿ ಹೊರಟ ಪ್ರೇಕ್ಷಕನಿಗೆ ಈ ಸಿನಿಮಾ ಮೋಸ ಮಾಡುವುದಿಲ್ಲ. ಮೊದಲಾರ್ಧ ಕಾಮಿಡಿ+ಲವ್ ಸಿನಿಮಾವನ್ನು ಆವರಿಸಿಕೊಂಡರೆ ಕೊನೆಯಾರ್ಧ ಸೆಂಟಿಮೆಂಟ್ ಪ್ರವೇಶ ಮಾಡಿ ಹೃದಯಗಳು ಮಿಡಿಯುವಂತೆ ಮಾಡುತ್ತದೆ. ಪ್ರೇಮಿಗಳಂತೂ ನೋಡಲೇಬೇಕಾದ ಸಿನಿಮಾವಿದು.

ನಿರ್ದೇಶಕರು ಇಡೀ ಸಿನಿಮಾದಲ್ಲಿ ಒಂದು ಸುಂದರ ಪ್ರೇಮದ ಚಿತ್ರಣವನ್ನು ಬಿಚ್ಚಿಟ್ಟಿದ್ದಾರಾದರೂ ನಿರೂಪಣೆಯಲ್ಲಿ ಕೊಂಚ ಎಡವಿದ್ದಾರೆ ಎನ್ನಬಹುದು. ಚಿತ್ರವನ್ನು ನೋಡುತ್ತಾ ನೋಡುತ್ತಾ ‘ಈ ಕಥೆಯನ್ನು ಇನ್ನೂ ಚೆನ್ನಾಗಿ ನಿರೂಪಿಸಬಹುದಿತ್ತು’ ಅಂತ ಪ್ರೇಕ್ಷಕ ಪ್ರಭುವಿನ ಮನಸ್ಸಿಗೆ ಒಮ್ಮೆ ಅನ್ನಿಸಿದರೆ ಅಚ್ಚರಿಯೇನಿಲ್ಲ. ಮಧ್ಯಂತರದಲ್ಲಿ ನಾಯಕನಿಂದ ಅನಾವಶ್ಯಕ ಕೊಲೆ ಮಾಡಿಸಿ ಜೈಲು ಸೇರಿಸುವ ನಿರ್ದೇಶಕರು ತದನಂತರದಲ್ಲಿ ಹೊಸತನವನ್ನೇನೂ ನೀಡಿಲ್ಲ.

ಪ್ರೇಕ್ಷಕ ಅಂದುಕೊಂಡಂತೆಯೇ ಸಾಗುವುದರಿಂದ ಅಂತಹ ಟ್ವಿಸ್ಟ್ ಗಳು ಕಾಣಸಿಗುವುದಿಲ್ಲ. ಅಜಯ್ ರಾವ್ ನಟನೆ ಮೆಚ್ಚುವಂತಿದೆ. ಬುಲೆಟ್ ಪ್ರಕಾಶ್ ಕೂಡ ಎರಡು ಆಯಾಮಗಳಲ್ಲಿ ಅಭಿನಯಿಸಿ ಆಲ್ ರೌಂಡರ್ ಪಾತ್ರವನ್ನ ನಿಭಾಯಿಸಿ ಸೈ ಅನಿಸಿಕೊಳ್ಳುತ್ತಾರೆ. ತನ್ನ ಪ್ರೇಯಸಿ ಕೊಡುವ ರೋಸ್ ಗಳನ್ನ ಜೈಲಿನೊಳಗೆ ಶೇಖರಿಸಿಡುವ ನಾಯಕನ ಪ್ರೀತಿ ಅದ್ಭುತವೆನಿಸುತ್ತದೆ. ಆದರೆ ನೂರಾರು ದಿನಗಳಾದರೂ ಹೂ ಬಾಡದಿರುವುದು ವಿಚಿತ್ರವೆನಿಸುತ್ತದೆ. ಆದಿಯಿಂದ ಅಂತ್ಯದವರೆಗೂ ರೋಸ್,

ಪ್ರೀತಿಯ ರಾಯಭಾರಿಯೆನಿಸಿಕೊಳ್ಳುವುದು ಸುಳ್ಳಲ್ಲ ಜೈಲರ್ ಆಗಿ ಸಾಯಿಕುಮಾರ್ ಗಮನ ಸೆಳೆಯುತ್ತಾರೆ. ಪೋಷಕ ನಟರಾಗಿ ಶಂಕರ್ ಅಶ್ವತ್ಥ್ ಹಾಗೂ ಚಂದ್ರಶೇಖರ್ ಸಹಜ ಅಭಿನಯ ನೀಡಿದ್ದಾರೆ. ಒಂದು ಹಾಡನ್ನು ಹೊರತುಪಡಿಸಿ ಉಳಿದ ಹಾಡುಗಳು ತಾಳ್ಮೆ ಪರೀಕ್ಷೆ ಮಾಡುವಂತಿದೆ. ಸಂಭಾಷಣೆ ಚೆನ್ನಾಗಿದೆ ಅಂತಲೇ ಹೇಳಬಹುದು. ನವಿರಾದ ಪ್ರೇಮಕಥೆ ಸಿನಿಮಾವನ್ನು ಗೆಲ್ಲಿಸುವ ಶಕ್ತಿ ಹೊಂದಿದೆ. ಸಣ್ಣಪುಟ್ಟ ಲೋಪದೋಷಗಳನ್ನು ಹೊರತುಪಡಿಸಿದರೆ ಮನೆಮಂದಿಯೆಲ್ಲಾ ನೋಡಿ ‘ದಿಲ್ ಖುಷ್’ ಆಗುವಂತಹ ಸಿನಿಮಾವಿದು.