ಹೆಣ್ ಹೈಕ್ಳ ಮನ್ಸು ಮಲ್ಟಿಪಲ್ ಚಾರ್ಜರ್ ಥರ

by

“ಗೊತ್ತಿಲ್ಲ”

ಕಣ್ಮುಚ್ಕೊಳಿ ಓದಕಾಗ್ದಿದ್ರೆ. ಕಿವಿ ಮುಚ್ಕಳಿ ಕೇಳಕಾಗ್ದಿದ್ರೆ. ತಲೆಕೆರ್ಕೊಳಿ ಯಾವ್ದೂ ಮಾಡಕಾಗ್ದಿದ್ರೆ.
ನಂಗ್ ಮಳೆ ಬಂದಾಗೆಲ್ಲಾ ಒಂಥರಾ ಫೀಲ್ ಆಗತ್ತೆ (ಛತ್ರಿ ಇಲ್ಲಾಂತ).

ನಮ್ಮನೆ ಹಂಡೆಯ ಮೇಲಾಣೆ,

ನಂಗಿದ್ದದು ಒಂದೇ ಒಂದು ಗರ್ಲ್ ಫ್ರೆಂಡುರೀ. ಲವ್ವರ್ ಇದ್ರೂನು ಮಳೆ ಬಂದಾಗ ಫೀಲ್ ಮಾಡ್ಕೊಳ್ಳದ ಪರಪಂಚದ ಪ್ರಪ್ರಥಮ ಪಿರುತಿಗಾರ ನಾನೇ ಇರ್ಬೇಕು.
ಇದು ಕರೆಂಟ್ ಕಂಬದ ಕೆಳ್ಗಡೆ ಕೂತ್ಕೊಂಡು ಓದಿ ದೊಡ್ ಹೆಸ್ರು ಗಿಸ್ರು ಮಾಡ್ಕೊಂಡವ್ರ ಥರ ಹೆಮ್ಮೆಯ ವಿಷ್ಯ ಅಂತ ನಂಗಂತೂ ಅನಿಸಲ್ಲ.
ಎಷ್ಟೋ ಸಲ ಸಣ್ ಸಣ್ ವಿಷ್ಯಗಳೇ ನಂಗ್ ಅರ್ಥ ಆಗಲ್ಲ. ಇನ್ನೂ ಕೆಲ ವಿಷಯಗಳಿಗೆ ಅರ್ಥನೇ ಇರಲ್ಲ. ಅರ್ಥ ಸಿಗೋ ವಿಷ್ಯಗಳು ನನ್ ಖಾಲಿ ಮಡಕೆಯಂತ ತಲೆಗೆ ಸೂಟ್ ಆಗಲ್ಲ.
ಹಂಗಾಗಿ ನನ್ನನ್ನ ಯಾರೂ ಅರ್ಥ ಮಾಡ್ಕೊಂಡಿಲ್ಲ, ಮಾಡ್ಕೊಂಡ್ರೂ ವ್ಯರ್ಥನೇ ಬಿಡಿ. ಪ್ರತಿಯೊಬ್ಬ ಹುಡುಗನ ಫ್ಲಾಶ್ ಬ್ಯಾಕಲ್ಲಿ ಒಂದೇ ಒಂದು ಹುಡುಗಿ ಸಿಗೋದಂತೆ.
ಆದರೆ ಪ್ರತಿಯೊಂದು ಹುಡುಗಿಯ ಫ್ಲಾಷ್ ಬ್ಯಾಕಲ್ಲಿ ಕನಿಷ್ಠ ನಾಲ್ಕಾರು ಹುಡುಗರು ಗೋಲಿ ಹೊಡಿತಿರ್ತಾರಂತೆ.

ಈ ಗಾದೆನಾ ಹುಡ್ಗೀರು ಕೇಳಿದ್ರೆ ಡಬ್ಬಾ ಗಾದೆ ಅಂದ್ಬಿಡ್ತಾರೆ.

ಸತ್ಯ ಯಾವತ್ತೂ ಡಬ್ಬಾ ಅನಿಸೋದು ಸೃಷ್ಟಿ ನಿಯಮ.
ಮಳೆಗಾಲ್ದಲ್ಲಿ ನೀರಿಗೆ ಕಲರ್ ಬಂದಂಗೆ ನನ್ನಾಕೆ ಮನ್ಸಿಗೆ ಆಗಾಗ ಬಣ್ಣ ಮೆತ್ಕೊತಿರತ್ತೆ. ಆದರೆ ಆ ಬಣ್ಣದಲ್ಲಿ ನನ್ನ ಹೆಸ್ರನ್ನು ಬಿಟ್ಟು ಉಳಿದೆಲ್ಲಾ ಹುಡುಗ್ರ ಹೆಸರು ಬರೆದಿರತ್ತೆ.

ಹೆಣ್ ಹೈಕ್ಳ ಮನ್ಸು ಮಲ್ಟಿಪಲ್ ಚಾರ್ಜರ್ ಥರ.

ಯಾವುದಕ್ ಬೇಕಾದ್ರೂ ಅಡ್ಜಸ್ಟ್ ಆಗಿಬಿಡತ್ತೆ. ಹುಡ್ಗೀರ ಮನಸನ್ನ ಅರ್ಥ ಮಾಡ್ಕೋಳೋಕಿರೋದು ಒಂದೇ ಒಂದು ಮಾರ್ಗ.
ಅದೇನಂತ ಹೇಳಲ್ಲ, ಹೇಳ್ರೆ ನೀವೂ ಬುದ್ಧಿವಂತರಾಗಿಬಿಡ್ತೀರಾ. ಸ್ವಾರ್ಥ ಅಲ್ಲ, ಕೆಲವೊಂದು ವಿಷಯಗಳು ಅರ್ಥವಾಗದಿದ್ರೇನೇ ಚೆಂದ ಅಂತ.
ಲವ್ವಾಗೋ ಮೊದ್ಲು ನನ್ ಬಾಳು ಆಣೆಕಟ್ಟಿನ ನೀರಿನ್ ಥರ ಇದ್ದಿತ್ತಾದ್ರೂ, ಗ್ರಹಣದ ಟೈಮಲ್ಲಿ ಲವ್ವಾಗಿದಕ್ಕೋ ಏನೋ,
ಅದ್ರ ನಂತ್ರ ರಾತ್ರಿ ನಿದ್ದೆನೇ ಮರೆತೋಯ್ತು (ಸ್ಟಾರ್ಟಿಂಗಲ್ಲಿ – ಲವ್ ಆದ ಖುಷಿಗೆ, ಆಮೇಲಾಮೇಲೆ- ಎಟಿಎಂ ನಲ್ಲಿ ದುಡ್ಡು ಕಾಪಿ ಪೇಸ್ಟ್ ಆಗ್ತಿರೋ ತಲೆಬಿಸಿಗೆ).
ದರಿದ್ರದ ವಯಸ್ಸಲ್ಲಿ ಅಪ್ಪಿತಪ್ಪಿ ಏಕಾಏಕಿ ಲವ್ವಾಯ್ತು ಅಂತಾಗ್ಬುಟ್ರೆ ಕಿಸೆಯಲ್ಲಿರೋ ಕಾಸು ಉಡುಪಿ ಹೊಟೇಲ್ ನ ಗೋಲಿಬಜೆಯಷ್ಟೇ ಫಾಸ್ಟಾಗಿ ಖಾಲಿ ಆಗತ್ತೆ ಕಣ್ರೀ.
ನಮ್ ಹುಡ್ಗೀದು, ಬರಿಗೈ ಆದಾಗ ಟಾಟಾ ಹೇಳುವಂತ ದೊಡ್ ಮನಸೇನೂ ಆಗಿರಲಿಲ್ಲ.
ಆದ್ರೂ ನನ್ನನ್ಯಾಕೆ ಬಿಟ್ಟೋದ್ಲು ಅನ್ನೋದು ನಂಗ್ ಗೊತ್ತಿಲ್ಲ. ಹುಡುಗೀರು ಬಿಟ್ಟೋಗುವಾಗ ಕಾರಣವನ್ನ ಯಾಕ್ ಹೇಳೊಲ್ಲ?
ಅದು ಪ್ರಪಂಚದಲ್ಲಿ ಗಡ್ಡ ಬಿಟ್ಕೊಂಡು ದೇವದಾಸ್ ಆದ ಪ್ರೇಮಿಗಳಿಗಾಗಲೀ, ಹುಟ್ಟಿಸಿದ ಪರಮಾತ್ಮನಿಗಾಗಲೀ ಇನ್ನೂ ಕಂಡು ಹಿಡಿಯೋಕಾಗಿಲ್ಲ.
ಗ್ರಹಾಂಬೆಲ್, ನ್ಯೂಟನ್ ಮುಂತಾದವ್ರು ಈಗಿನ್ ಕಾಲದಲ್ಲಿದ್ದಿದ್ರೆ ಪತ್ತೆಹಚ್ಚೋಕೆ ಟ್ರೈ ಮಾಡ್ತಿದ್ರೇನೋ.

ಸೊನ್ನೆ ಯಾಕೆ ಯಾವಾಗ್ಲೂ ರೌಂಡ್ ಶೇಪಲ್ಲೇ ಇರತ್ತೆ?
ವರ್ಣಮಾಲೇಲಿ ‘ಅ’ ಯಾಕೆ ಮೊದಲನೇ ಅಕ್ಷರ ಆಯ್ತು?
ಕಳೆದೋದ ಗರ್ಲ್ ಫ್ರೆಂಡನ್ನ ಗೂಗಲ್ ನಿಂದ ಯಾಕ್ ಡವ್ನ್ ಲೋಡ್ ಮಾಡಕಾಗಲ್ಲ?
ಕಿಡ್ನಿಗ್ಯಾಕೆ ಮೆದುಳಿನಷ್ಟು ಬುದ್ಧಿ ಇಲ್ಲ?

ಮುಂತಾದ ಅದೆಷ್ಟೋ ಬಕ್ವಾಸ್ ಪ್ರಶ್ನೆಗಳು ಯಾಕ್ ನನ್ ತಲೇಲಿ ಮೂಡ್ತಿರ್ತವೆ ಅನ್ನೋದು ಬೆಟ್ಟ ಹೊತ್ತ ಬೆಟ್ಟಪ್ಪಯ್ಯನ್ ಮೇಲಾಣೆ, ನಂಗೊತ್ತಿಲ್ಲ.
ಲವ್ ಫೇಲ್ಯೂರ್ ಆದ್ಮೇಲೆ ಮೂರ್ ಶನಿವಾರ ಕಳಿಯೋತನಕ ಮನಸಿನ್ ಪೂರ್ತಿ ವಿಷಾದ..ಇನ್ನೊಂದ್ ಶನಿವಾರ ಬರುವಷ್ಟರಲ್ಲಿ ಮನಸಿನ್ ಪೂರ್ತಿ ಗೊಂದಲ.
ಇದೇ ನೆನಪಲ್ಲಿ ಕೊರಗಿ ಕೊರಗಿ ನೋವಲ್ಲೇ ನಗುತ್ತಾ ಜೀವನ ಕಳಿಬೇಕೋ ಅಥವಾ ಇವಳನ್ನು ಮರೆತು ಹೊಸ ಪ್ರಫೋಸಲ್ ಗೆ ತೊಡೆತಟ್ಟಿ ಸಜ್ಜಾಗಬೇಕಾ ಅನ್ನೋದು.
“ಇವಳನ್ನ ನಿಷ್ಕಲ್ಮಶವಾಗಿ ಪ್ರೀತಿಸಿದ್ದು ನಿಜವೇ ಆದಲ್ಲಿ ಮತ್ತೊಂದ್ ಲವ್ವು ಮಾಡೋಕೋಗಲ್ಲ,
ಹಾಗೇನಾದ್ರೂ ಹೊಸ ಲವ್ ಮಾಡ್ರೆ ಹಳೆದು ಟೈಂ ಪಾಸ್ ಗೆ ಮಾಡಿದಂಗಾಗತ್ತೆ” ಇದು ಸ್ನೇಹಿತರು ಹೇಳೋ ಮಾತು.
ಹಾಗಾದ್ರೆ ಲೈಫಲ್ಲಿ ಒಬ್ಬರಿಗೆ ಮಾತ್ರ ಪ್ರೀತಿ ಕೊಡುವಷ್ಟು ತಾಕತ್ತಾ ನಮ್ ಹೃದಯಕ್ಕಿರೋದು?
ಹೆತ್ತವರನ್ನ, ಬಂಧುಬಳಗವನ್ನ, ಅಕ್ಕತಂಗಿಯರನ್ನ, ಅಣ್ಣತಮ್ಮಂದಿರನ್ನ, ಸ್ನೇಹಿತರನ್ನ ಹೀಗೆ ಎಷ್ಟೋ ಜನರನ್ನಾ ಪ್ರೀತಿಸಲ್ವಾ ನಾವು?
ಎಷ್ಟ್ ಜನರನ್ನ ಬೇಕಾದ್ರೂ ನಿಷ್ಕಲ್ಮಶವಾಗಿ ಪ್ರೀತಿಸೋ ಶಕ್ತಿ ಹೃದಯಕ್ಕೆ ಇದ್ದರೂ ಎರಡನೇ ಲವ್ ಆಗುವಾಗ ಹಳೆತನ್ನ ಅಟ್ರಾಕ್ಷನ್ ಲವ್ ಅಂತ ಅನ್ಯಾಯವಾಗಿ ಬಿಂಬಿಸೋದು ಯಾಕಂತ ನನಗಿನ್ನೂ ಅರ್ಥ ಆಗಿಲ್ಲ.
ಅರ್ಥ ಆಗತ್ತೋ ಇಲ್ವೋ ಅನ್ನೋದೂ ನಂಗ್ ಗೊತ್ತಿಲ್ಲ.

-ವಿನಾಯಕ ಭಟ್ (ಖುಷಿವಿನು)